ಮೆಕ್ಕೆಕಟ್ಟೆ	
ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ತಾಲ್ಲೂಕಿನ ಶಿರಿಯಾರ್ ಗ್ರಾಮದಲ್ಲಿರುವ ಒಂದು ಸ್ಥಳ. ಉಡುಪಿಯಿಂದ 28ಕಿಮೀ ದೂರದಲ್ಲಿ ಬಾರಕೂರಿನಿಂದ 8 ಕಿಮೀ ಉತ್ತರಕ್ಕಿದೆ.

ಪ್ರಾಚೀನ ಕಾಷ್ಠಶಿಲ್ಪಗಳ ಅಪೂರ್ವ ಸಂಗ್ರಹದಿಂದ ಈ ಸ್ಥಳ ಪ್ರಸಿದ್ಧವಾಗಿದೆ. 60 ಸೆಂ ಮೀ ನಿಂದ 600 ಸೆಂಮೀ ಎತ್ತರದ ಬಣ್ಣಬಣ್ಣದ ವಿಲಕ್ಷಣರೂಪಗಳ ತುಳುನಾಡಿನ ದೈವಗಳ 170 ಮರದ ಮೂರ್ತಿಗಳನ್ನು ಇಲ್ಲಿರುವ ಬ್ರಹ್ಮಸ್ಥಾನದಲ್ಲಿ ಕಾಣಬಹುದು. ಉರುಗಳು ಎಂದು ಕೆರೆಯುವ ಈ ಕಾಷ್ಠಶಿಲ್ಪಗಳು ನೋಡುವವರ ಮನಸ್ಸಿನಲ್ಲಿ ಭಯಭಕ್ತಿಗಳನ್ನು ಮೂಡಿಸುತ್ತವೆ. ಈ ಶಿಲ್ಪಗಳು ಬಿಗುನಿಲುವಿನಲ್ಲಿ ನೆಟ್ಟಗೆ ನಿಂತಂತಿದ್ದು ಮೆಕ್ಕೆಕಟ್ಟೆ ಉರುನಿಂತ ಹಾಗೆ ಎಂಬ ರೂಢಿಮಾತಿಗೆ ಕಾರಣವಾಗಿದೆ. ಇಲ್ಲಿಯ ಪ್ರಧಾನ ದೇವತೆ ನಂದಿಕೇಶ್ವರ. ಮಿಕ್ಕವೆಲ್ಲ ಶಿವಗಣಗಳು.

ಸ್ಥಳಪುರಾಣದಿಂದ ತಿಳಿದುಬರುವಂತೆ ಇದು ಹಿಂದೆ ಜಂಬುಕೇಶ್ವರ ಋಷಿಗಳ ಆಶ್ರಮ, ಯಜ್ಞಕ್ಕಾಗಿ ಮೇಕೆ ಕಟ್ಟಿದ್ದ ಸ್ಥಳವೇ ಮುಂದೆ ಮೆಕ್ಕೆಕಟ್ಟೆ ಅಥವಾ ಕೆಲವರು ಹೇಳುವಂತೆ ಮೆಕ್ಕಿಕಟ್ಟೆ (ಕುಂದಾಪುರ ಕನ್ನಡದ ವೈಶಿಷ್ಟ್ಯ) ಎಂದು ಕರೆಸಿಕೊಂಡಿರಬೇಕೆಂದು ಐತಿಹ್ಯವಿದೆ. ಇಲ್ಲಿಯ ಒಂದು ಕಿಮೀ ದೂರದಲ್ಲಿ ಜಂಬೂರಿ ಎಂಬಲ್ಲಿ ಪಾಳುಬಿದ್ದ ಶಿವದೇವಾಲಯವಿದೆ.															
	*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ